ಚೀನೀ ಪುರಾಣ

ಚೀನದಲ್ಲಿ ಮೂರು ಧರ್ಮಗಳು ಬಳಕೆಯಲ್ಲಿದ್ದುವು-ಬೌದ್ಧಧರ್ಮ, ತಾಓಧರ್ಮ ಮತ್ತು ಕನ್‍ಫ್ಯೂಷಸ್ ಧರ್ಮ. ತುಂಬ ಪ್ರಾಚೀನ ಕಾಲದಿಂದ ಚೀನದ ಆಡಳಿತ ಧರ್ಮ ಕನ್‍ಫ್ಯೂಷಸ್ ಧರ್ಮವೇ ಆಗಿದ್ದಿತು. ಚಕ್ರವರ್ತಿಯಾದವ ಕಾಲಕಾಲಕ್ಕೆ ಕನ್‍ಫ್ಯೂಷಸ್, ಪಿತೃದೇವತೆಗಳು ಮತ್ತು ಸ್ವರ್ಗ, ಸೂರ್ಯ, ಚಂದ್ರ, ಪೃಥ್ವೀ, ಸಮರದೇವತೆ-ಇವರಿಗೆಲ್ಲ ಬಲಿಯನ್ನು ಸಲ್ಲಿಸುತ್ತಿದ್ದ. ಇದರಂತೆ ತಾಓಧರ್ಮವೂ ಪ್ರಬಲವಾಗಿದ್ದಿತು. ಕಂಫೂಷೆಯ ಕಾಲದಲ್ಲೇ ಇದ್ದನೆಂದ ಹೇಳಲಾದ ಲಾವೋಟ್ಸು ಎಂಬಾತನೇ ತಾಓಧರ್ಮದ ಪ್ರವರ್ತಕನಾದರೂ ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿದ್ದ ಚಂಗ್ ತಾಓ ಲಿಂಗ್ ಎಂಬಾತನೇ ಈ ಧರ್ಮವನ್ನು ವಿಶೇಷವಾಗಿ ಪರಿಷ್ಕರಿಸಿದ. ಇವನು ದಿವ್ಯಾಚಾರ್ಯ (ತಿಎನ್-ಷಿಃ) ಎಂದು ಪ್ರಸಿದ್ಧನಾಗಿದ್ದಾನೆ; ಎಂಟನೆಯ ಶತಮಾನದಲ್ಲಿ ಇವನನ್ನು ದೇವತೆಯೆಂದು ಪರಿಗಣಿಸಿದರು. ಇದೇ ಸುಮಾರಿಗೆ ಬೌದ್ಧಧರ್ಮವೂ ಚೀನ ದೇಶವನ್ನು ಪ್ರವೇಶಿಸಿ ಅಲ್ಲಿನ ಜನರ ಮನೋಧರ್ಮ ಮತ್ತು ದೇಶದ ಲಕ್ಷಣಗಳನ್ನನುಸರಿಸಿ ವಿಶಿಷ್ಟವಾದ ರೂಪವನ್ನು ತಳೆಯಿತು. ಚೀನೀ ಜನರ ಪುರಾಣ ಕಲ್ಪನೆಗಳಲ್ಲಿ ಮತ್ತು ಕತೆಗಳಲ್ಲಿ ಈ ಮೂರು ಧರ್ಮಗಳಲ್ಲಿನ ವಿವರಗಳು ಕಲೆತಿರುವುದನ್ನು ಕಾಣಬಹುದು. ಆದರೆ ತಾಓಧರ್ಮವೇ ಚೀನೀ ಪುರಾಣಗಳಿಗೆ ಪ್ರಮುಖವಾದ ಅರಕವೆನ್ನಬಹುದು. ಚೀನೀ ಜನರ ದೇವತೆಗಳೆಲ್ಲ ಬಹುಮಟ್ಟಿಗೆ ತಾಓಧರ್ಮದವರೇ.

ಚೀನೀ ಪುರಾಣಗಳಲ್ಲಿ ಮುಖ್ಯವಾಗಿ ಬರುವ ದೇವತೆಗಳು ಚೀನೀ ರಾಜ್ಯಭಾರ ಕ್ರಮದಲ್ಲಿ ಅಧಿಕಾರಿಗಳಿದ್ದಂತೆಯೇ. ಒಬ್ಬೊಬ್ಬ ದೇವತೆಗೆ ಒಂದೊಂದು ಅಧಿಕಾರ, ಕಾರ್ಯಗೌರವ, ಸ್ಥಾನ, ಮಾನ; ಅವರಲ್ಲಿಯೂ ಭಾರತೀಯರಲ್ಲಿರುವಂತೆಯೇ ತಾರತಮ್ಯಗಳುಂಟು. ದೇವತೆಗಳು ತಂತಮ್ಮ ಕಾರ್ಯಗಳನ್ನು ನಿರ್ವಹಿಸದಿದ್ದರೆ ಅವರಿಗೆ ಪದಚ್ಯುತಿಯೂ ಉಂಟು. ಈ ದೃಷ್ಟಿಯಿಂದ ದೇವತಾ ತಾರತಮ್ಯದಲ್ಲಿ ವ್ಯತ್ಯಾಸಗಳಾಗುವುದು ಸಾಧ್ಯ. ಯಾವೊಬ್ಬ ದೇವತೆಯ ಸ್ಥಾನಮಾನವೂ ಶಾಶ್ವತವಲ್ಲ; ಆ ದೇವತೆ ನಿರ್ವಹಿಸುವ ಕೆಲಸ ಮಾತ್ರ ಶಾಶ್ವತವಾದುದು. ಹೀಗಾಗಿ ಚೀನೀದೇವತೆಗಳಲ್ಲಿ ಹೊಸಬರು ಮತ್ತೆ ಮತ್ತೆ ಕಾಣಿಸಿ ಕೊಳ್ಳುತ್ತಾರೆ. ಇದಕ್ಕೆ ಕಾರಣವೇನೆಂದರೆ ಚೀನೀದೇವತೆಗಳು ಮನುಷ್ಯ ಅಧಿಕಾರಿಗಳ ಪಡಿಯಚ್ಚಿನಲ್ಲಿಯೇ ಸಿದ್ಧರಾದವರು.

ಚೀನೀ ಪುರಾಣಗಳಲ್ಲಿ ದೇವತೆಗಳ ಸಂಖ್ಯೆ ತುಂಬ ದೊಡ್ಡದು. ಇವರೆಲ್ಲರೂ ಒಂದೇ ಸ್ವರ್ಗದಲ್ಲಿರುವುದಿಲ್ಲ; ಪ್ರತಿಯೊಬ್ಬ ದೇವತೆಗೂ ಪ್ರತ್ಯೇಕ ಕ್ಷೇತ್ರವಿರುವುದು ಇಲ್ಲಿನ ಸ್ವಾರಸ್ಯ. ಸ್ವರ್ಗದಲ್ಲಿಯೂ ನೆಲೆಗಳಿವೆ; ಒಂದು ಕಲ್ಪನೆಯಂತೆ ಒಂಬತ್ತು, ಇನ್ನೊಂದರಂತೆ ಮೂವತ್ತಮೂರು ನೆಲೆಗಳು. ದೇವಾಧಿದೇವತೆ ಮೇಲಿನ ನೆಲೆಯಲ್ಲಿರುತ್ತಾನೆ. ಈ ನೆಲೆಯಲ್ಲಿರುವ ದೇವತೆಗೆ ಯು-ತಿ ಎಂದು ಹೆಸರು; ಈ ಮಾತಿಗೆ 'ಜೇಡ್‍ನ ದಿವ್ಯವ್ಯಕ್ತಿ ಎಂದರ್ಥ. ಇವನನ್ನು ದಿವ್ಯಚಕ್ರವರ್ತಿ ಎಂದೂ ಪಿತೃಶ್ರೀಸ್ವರ್ಗ (ಲಾಓ-ತಿಎನ್-ಯೆ) ಎಂದೂ ಕರೆಯುವುದುಂಟು. ಇವನೇ ಆದಿದೇವತೆ: ಮನುಷ್ಯರನ್ನು ಸೃಷ್ಟಿಸಿದವ. ಇವನು ಮಣ್ಣಿನಲ್ಲಿ ಗೊಂಬೆಗಳನ್ನು ಮಾಡಿ ಅವನ್ನು ಬಿಸಿಲಿಗೆ ಒಣಗಲಿಟ್ಟನಂತೆ; ಆ ಸಮಯಕ್ಕೆ ಸರಿಯಾಗಿ ಭಾರಿ ಮಳೆ ಬಿದ್ದುದರಿಂದ ಗೊಂಬೆಗಳನ್ನು ಎತ್ತಿ ಒಳಗಿರಿಸಿದನಂತೆ. ಅಷ್ಟರಲ್ಲಿ ಕೆಲವು ಗೊಂಬೆಗಳು ನೀರಿನಿಂದ ತೊಯ್ದು ಬಿರುಕುಬಿಟ್ಟುವು. ಕೆಲವು ಕೈಕಾಲು ಕರಗಿ ನಿಂತುವು; ಕೆಲವು ಏನೂ ಆಗದೆ ಸರಿಯಾಗಿದ್ದುವು. ಈ ಗೊಂಬೆಗಳೇ ಮುಂದೆ ಮನುಷ್ಯರಾದರು. ಸರಿಯಾಗಿದ್ದ ಗೊಂಬೆಗಳು ಆರೋಗದೃಢಕಾಯರಾದ ಮನುಷ್ಯರಾದುವು; ಮಳೆಗೆ ಒಡೆದುಹೋದವು ರೋಗಿಗಳು, ಅಂಗವಿಕಲರು, ಕುರೂಪಿಗಳು ಆದುವು. 
ಪಿತೃಶ್ರೀಸ್ವರ್ಗ ದೇವಾಧಿದೇವತೆಯಾದರೂ ಅವನಿಗಿಂತ ಮೇಲಿನ ದೇವತೆ ಅದಿಕಾರಣ-ಸ್ವರ್ಗೇಶ. ಇವನ ಅನಂತರವೇ ಪಿತೃಶ್ರೀಸ್ವರ್ಗ ಮೈದಳೆದುದು.  ಪಿತೃಶ್ರೀಸ್ವರ್ಗ ದೇವತೆ ತನ್ನದೇ ಆದ ಅರಮನೆಯಲ್ಲಿದ್ದುಕೊಂಡು, ತನ್ನದೇ ಆದ ಸೇನೆಯೊಂದಿಗೆ ತನ್ನ ಸಂಸಾರದೊಂದಿಗೆ ವಿಹರಿಸುತ್ತಾನೆ. ಎಪ್ಪತ್ತೆರಡು ಬಗೆಗಳಲ್ಲಿ ಇವನು ತನ್ನ ರೂಪವನ್ನು ಮಾರ್ಪಡಿಸಿ ಕೊಳ್ಳಬಲ್ಲ. ಇವನಿಗೆ ಚೀನದಲ್ಲಿ ಸಾವಿರಾರು ದೇವಾಲಯಗಳಿದ್ದವು. ಇವನ ಮಗ ಎರ್ಹ್‍ಲಂಗ್ ಪಾಪಗಳನ್ನು ದೂರಮಾಡುವ ದೇವತೆ; ಭಾರತದ ಅಘಮರ್ಷಣನಂತೆ. ಪಿತೃಶ್ರೀಸ್ವರ್ಗ ದೇವತೆಯ ಶಕ್ತಿ ರಾಜಮಾತೆ ವಂಗ್-ಮು. ಸುರಸುಂದರಿಯಾದ ಈಕೆಗೆ ತನ್ನ ಪರಿವಾರವಿದೆ. ಅಮೃತಸಮಾರಾಧನೆಗಳಲ್ಲಿ ಈಕೆ ಪ್ರಮುಖಳು; ಅಮೃತದ ಗುಣವಿರುವ ಪೀಚ್‍ಹಣ್ಣುಗಳನ್ನು ಈಕೆ ಈ ಸಂದರ್ಭದಲ್ಲಿ ದೇವತೆಗಳಿಗೆಲ್ಲ ಹಂಚುವವಳು. ದೇವತೆಗಳ ರಾಜ್ಯದಲ್ಲಿ ಮೂರು ಸಾವಿರ ವರ್ಷಗಳಿಗೊಮ್ಮೆ ಹಣ್ಣಾಗುವ ಪೀಚ್ ಅವರಲ್ಲಿ ಅಮೃತವೆಂದು ಕಲ್ಪನೆ; ಈಗಲೂ ಚೀನೀಯರಲ್ಲಿ ಪೀಚ್ ದೀರ್ಘಾಯುಸ್ಸಿನ ಸಂಕೇತ.

		ಇವರಲ್ಲದೆ ಚೀನೀಯರಲ್ಲಿ ಕೆಲವು ಪ್ರಕೃತಿದೇವತೆಗಳು ಇವೆ. ಇವರ ಪ್ರಸ್ತಾಪ ಅವರ ಪುರಾಣಗಳಲ್ಲಿ ಬರುತ್ತದೆ. ಸೂರ್ಯ ಮೊದಲಿಗೆ ಹುಂಜದ ಆಕಾರದಲ್ಲಿದ್ದು ಸತ್ಪಥವನ್ನು ಹಿಡಿದು ಮನುಷ್ಯನ ಮುಖವನ್ನು ಪಡೆದ ದೇವತೆ. ವರ್ಷಾರಂಭದಲ್ಲಿ ಈ ದೇವತೆಗೆ ಎಡೆಯಿಡುವ ಪದ್ಧತಿಯಿದೆ. ಚಂದ್ರನ ಪೂಜೆ ಇನ್ನಷ್ಟು ಸಡಗರದಿಂದ ನಡೆಯುತ್ತದೆ. ಚಂದ್ರನಲ್ಲಿ ಚಂಗ್-ಹೋ ಎಂಬ ದೇವತೆಯಿದ್ದು ಈಕೆ ಅತ್ಯಂತ ಸಮರ್ಥ ಬಿಲ್ಲಾಳು ಐ ಎಂಬಾತನ ಹೆಂಡತಿಯೆಂಬ ಕಲ್ಪನೆಯಿದೆ. ಚೀನೀ ಪುರಾಣಗಳಲ್ಲಿ ಒಮ್ಮೆ ಹತ್ತು ಸೂರ್ಯರು ಒಂದೇ ಬಾರಿಗೆ ಕಾಣಿಸಿಕೊಂಡು ಭೂಮಿಯನ್ನು ಉರಿಸಲಾರಂಭಿಸಿದ ಕತೆ ಬರುತ್ತದೆ. ಆಗ ಈ ಬಿಲ್ಲಾಳು ತನ್ನ ಬಾಣಗಳಿಂದ ಒಂಬತ್ತು ಸೂರ್ಯರನ್ನು ಹೊಡೆದು ಕೆಳಗುರುಳಿಸಿದ. ಇದರಿಂದ ಸಂತೋಷಗೊಂಡ ದೇವತೆಗಳು ಇವನಿಗೆ ಅಮೃತವನ್ನು ಕುಡಿಯಲು ಕೊಟ್ಟರು. ಆತ ಅದನ್ನು ಮನೆಗೊಯ್ದು ಇಟ್ಟಿದ್ದಾಗ ಅವನಿಗೆ ಕಾಣದಂತೆ ಅವನ ಹೆಂಡತಿ ಕುಡಿದು ಬಿಟ್ಟಳು. ಇದನ್ನು ತಿಳಿದ ಬಿಲ್ಲಾಳು ಸಿಟ್ಟಿಗೇಳಲು ಹೆಂಡತಿ ಚಂದ್ರನಲ್ಲಿಗೆ ಓಡಿಬಿಟ್ಟಳು. ಅಲ್ಲಿದ್ದ ಮೊಲ ಆಕೆಗೆ ರಕ್ಷೆಯನ್ನು ಕೊಟ್ಟು ಆಕೆಯ ಗಂಡನೊಂದಿಗೆ ಹೋರಾಡಿ ಅವನನ್ನು ಸೋಲಿಸಿತು. ಅಂದಿನಿಂದ ಆಕೆ ಚಂದ್ರನಲ್ಲಿಯೆ ಇದ್ದಾಳೆ. ಲೈ-ಕುಂಗ್ ಗುಡುಗಿನ ದೇವತೆ; ನೀಲಿಬಣ್ಣದ ಬೊಜ್ಜುದೇಹ, ಕುರೂಪ, ಉದ್ದನೆಯ ಉಗುರುಗಳು ರೆಕ್ಕೆಗಳು ಇರುವ ದೇವತೆ. ಬರಿಮೈಯಲ್ಲಿ ತಿರುಗುವ ಈ ದೇವತೆ ಕೈಯಲ್ಲಿ ಉಳಿಸುತ್ತಿಗೆಗಳನ್ನು ಹಿಡಿದು, ಬಗಲಿಗೆ ಢಕ್ಕೆಗಳನ್ನು ನೇತುಬೀಳಿಸಿಕೊಂಡು, ಪಾಪಿಗಳನ್ನು ಸುತ್ತಿಗೆಯಿಂದ ಹೊಡೆಯುತ್ತಾನೆ. ಮನುಷ್ಯರಿಗೆ ತಿಳಿಯದ ಪಾಪಗಳೂ ಇವನಿಗೆ ತಿಳಿಯದೆ ಇರುವುದಿಲ್ಲ. ಮುಖ್ಯವಾಗಿ ಮನುಷ್ಯರಿಗೆ ತೊಂದರೆಯನ್ನುಂಟು ಮಾಡುವ ದೇವತೆ. ಆದರೆ ಕೆಲವೊಮ್ಮೆ ಮನುಷ್ಯರ ನೆರವೂ ಇವನಿಗೆ ಬೇಕಾಗುತ್ತದೆ.

	ಒಮ್ಮೆ ಒಬ್ಬ ಬೇಡ ಬೇಟೆಯಾಡುತ್ತ ಕಾಡಿನ ನಡುವೆ ದಾರಿತಪ್ಪಿದ; ಸಂಜೆಯಾಗಿ ಬಿರುಗಾಳಿ, ಜಡಿಮಳೆ ಆರಂಭವಾಯಿತು. ಗುಡುಗು-ಸಿಡಿಲುಗಳು ಹೊಡೆಯತೊಡಗಿದುವು. ಬೇಡ ದೊಡ್ಡದೊಂದು ಮರದ ಕೆಳಗೆ ನಿಂತಿದ್ದಾಗ, ಮಿಂಚೆರಗಿ ಅವನು ಕತ್ತೆತ್ತಿ ನೋಡಲು ಮರದ ಮೇಲೆ ಮಗುವೊಂದು ಸಣ್ಣಕಡ್ಡಿಗೆ ಬಾವುಟವೊಂದನ್ನು ಸಿಕ್ಕಿಸಿಕೊಂಡು ನಿಂತಿದ್ದಿತು. ಅದರ ಬಳಿ ಬಂದೊಡನೆ ಗುಡುಗು ಹಿಂದೆ ಸರಿಯುತ್ತಿತ್ತು. ಅಶುಚಿಯಾದ ಪದಾರ್ಥಗಳಿಗೆ, ಕರಿಯ ನಾಯಿಯ ರಕ್ತಕ್ಕೆ ದೇವತೆಗಳು ಹೇಸುವರೆಂದು ಕಲ್ಪನೆ. ಮಗು ಹಿಡಿದಿದ್ದ ಕಡ್ಡಿಯೂ ಬಾವುಟವೂ ಅಶುಚಿಯಾದುದೆಂದು ಬೇಡನಿಗೆ ತಟ್ಟನೆ ತಿಳಿದು, ದೇವತೆಗಳ ಕೆಲಸಕ್ಕೆ ನೆರವಾಗುವ ಉದ್ದೇಶದಿಂದ ಮಗುವನ್ನು ಬಾಣದಿಂದ ಹೊಡೆದು ಕೆಳಗುರುಳಿಸಿದ. ಒಡನೆಯೇ ಸಿಡಿಲು ಮರಕ್ಕೆ ಹೊಡೆದು, ಬೇಡ ಎಚ್ಚರ ತಪ್ಪಿ ಬಿದ್ದ. ಎಚ್ಚರ ತಿಳಿದು ಎದ್ದಾಗ ಪಕ್ಕದಲ್ಲಿ ಚೀಟಿಯೊಂದು ಬಿದ್ದಿದ್ದಿತು; ಅದರಲ್ಲಿ ದೇವತೆಗಳ ಕೆಲಸಕ್ಕೆ ನೆರವಾದುದಕ್ಕೆ ಹನ್ನೆರಡು ವರ್ಷ ಆಯಸ್ಸು ಹೆಚ್ಚಿದೆ ಎಂಬ ಬರೆಹವಿದ್ದಿತು. ಸಮೀಪದಲ್ಲಿಯೇ ತನ್ನ ಬಾಣದಿಂದ ಸತ್ತು ಬಿದ್ದಿದ್ದ ದೊಡ್ಡದೊಂದು ಹಲ್ಲಿಯ ಆಕೃತಿಯೂ ಇದ್ದಿತು. ಇದೇ ಮಗುವಿನ ರೂಪ ತಳೆದು ಗುಡುಗಿಗೆ ಅಡ್ಡಿಮಾಡುತ್ತಿದ್ದ ಮಗು ಎಂದು ಅವನಿಗೆ ಸ್ಪಷ್ಟವಾಯಿತು.

		ಗುಡುಗಿನ ದೇವತೆಗೆ ಗುಡಿಗಳಿಲ್ಲ; ಈ ದೇವತೆಯಿಂದ ದೊರೆಯುವುದು ಸಾವು, ತೊಂದರೆ ಅಷ್ಟೆ. ಜನ ಇವನನ್ನು ಆರಾಧಿಸುವುದಿಲ್ಲ. ಮಾಂತ್ರಿಕರು ಮಾತ್ರ ಇವನ ಮೊರೆ ಹೊಕ್ಕು ಇತರರಿಗೆ ತೊಂದರೆಯನ್ನು ತಂದೊಡ್ಡುತ್ತಾರೆ. ಗುಡುಗು ದೇವತೆಯ ಪರಿವಾರದಲ್ಲಿ ಮಳೆರಾಯ, ಮೋಡಗಳ ಹುಡುಗ, ಗಾಳಿರಾಯ ಇವೂ ದೇವತೇಗಳೇ. ಲುಂಗ್-ವಂಗ್ ಭಾರತದ ವರುಣನಿದ್ದಂತೆ. ಪಿತೃಶ್ರೀಸ್ವರ್ಗ ದೇವತೆಯ ಅಪ್ಪಣೆಯ ಮೇರೆ ಈ ದೇವತೆ ಆಯಾ ಪ್ರದೇಶಗಳಿಗೆ ಅಷ್ಟಷ್ಟು ಮಳೆ ಬೀಳಿಸುತ್ತಾನೆ. ಭೂಮಿಯ ಸುತ್ತಲೂ ನಾಲ್ಕು ಸಮುದ್ರಗಳಿದ್ದು, ಒಂದೊಂದು ಸಮುದ್ರಕ್ಕೂ ಅಧಿಪತಿಯಾಗಿ ಒಬ್ಬೊಬ್ಬ ಲುಂಗ್-ವಂಗ್ (ಅಹಿರಾಜ) ಇದ್ದಾನೆ. ಇವರು ಸಹೋದರರೆಂದು ಜನರ ಎಣಿಕೆ. ಒಬ್ಬೊಬ್ಬರಿಗೂ ಸಮುದ್ರದಡಿಯಲ್ಲಿ ರತ್ನಪ್ರಾಸಾದವಿದ್ದು, ಮೀನು, ಏಡಿ ಮೊದಲಾದ ಜಲಚರ ಪ್ರಾಣಿಗಳ ಪರಿವಾರವಿರುತ್ತದೆ. ಆಓ ಖುವಂಗ್, ಆಓ ಜುನ್, ಆಓ ಷುನ್ ಮತ್ತು ಆಓ ಚಿನ್ ಇವರೇ ನಾಲ್ವರು ಅಹಿರಾಜರು. ಇವರಲ್ಲದೆ ನದಿಗಳ ಬಳಿ, ಕೊಳ ಬಾವಿಗಳ ಬಳಿ ಒಂದೊಂದು ಅಹಿರಾಜನ ಸನ್ನಿಧಿಯಿರುತ್ತದೆ. ಕ್ಷಾಮ-ಅನಾವೃಷ್ಟಿ ಸಮಯಗಳಲ್ಲಿ ಇವಕ್ಕೆ ಪೂಜೆ ನಡೆಯುತ್ತದೆ. ಬಟ್ಟೆಯಲ್ಲಿ ಹಾವಿನ ಆಕೃತಿಯನ್ನು ಮಾಡಿ ಅದನ್ನು ಊರುಗಳಲ್ಲಿ ಮೆರವಣಿಗೆಯಲ್ಲಿ ಒಯ್ಯುವುದುಂಟು; ಇದು ಲುಂಗ್-ವಂಗ್ ದೇವತೆಯ ಪ್ರತೀಕ. ಹೀಗೆ ಮಾಡಿದರೆ ಮಳೆಯಾಗುವುದೆಂದು ಕಲ್ಪನೆ.

	ವೆನ್-ಚಾಂಗ್ ಸಾಹಿತ್ಯಾಭಿಮಾನಿ ದೇವತೆ. ಹದಿನೇಳು ಜನ್ಮಗಳನ್ನೆತ್ತಿ ಸಾಹಸದ ಕೆಲಸಗಳನ್ನು ಮಾಡಿ ಪಿತೃಶ್ರೀಸ್ವರ್ಗ ದೇವತೆಯನ್ನು ಮೆಚ್ಚಿಸಿದ ಬಳಿಕವೇ ಇದು ದೇವತೆಯಾದುದು. ಪ್ರತಿಯೊಬ್ಬ ಪಂಡಿತನ ಮನೆಯಲ್ಲಿಯೂ ಈ ದೇವತೆಯ ವಿಗ್ರಹವಿರುತ್ತಿದ್ದಿತು. ಕೈಯಲ್ಲಿ ದಂಡವನ್ನು ಹಿಡಿದು ಕುಳಿತಂತೆ ಈ ದೇವತೆಯನ್ನು ಚಿತ್ರಿಸುತ್ತಿದ್ದರು. ವೆನ್-ಚಾಂಗ್ ಎಂದರೆ ಪರೀಕ್ಷೆಗಳ ದೇವತೆ ಎಂದರ್ಥ. ಪಂಡಿತರಾಗುವ ಮೊದಲು ಹಲವಾರು ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕಾಗಿದ್ದಿತು. ಒಂದೊಂದು ಪರೀಕ್ಷೆಯಲ್ಲಿ ಉತ್ತೀರ್ಣನಾಗಲೂ ಈ ದೇವತೆಯ ಅನುಗ್ರಹ ಆವಶ್ಯಕವಾಗಿದ್ದಿತು. ವಿದ್ಯಾರ್ಥಿಗಳ ಬುದ್ಧಿ ಶಕ್ತಿಯನ್ನು ಅಳೆಯಲು ಕೊಳಗವನ್ನು ಬಳಸುವ ಈ ದೇವತೆ ಕೂರ್ಮಾಸನದ ಮೇಲೆ ಕುಳಿತು ಆ ವರ್ಷದ ಆ ತರಗತಿಯ ವಿದ್ಯಾರ್ಥಿಗಳೆಲ್ಲರ ಪಟ್ಟಿಯನ್ನು ಪಿತೃಶ್ರೀಸ್ವರ್ಗ ದೇವತೆಯ ಮುಂದಿಟ್ಟು, ಉತ್ತೀರ್ಣನಾಗುವ ವಿದ್ಯಾರ್ಥಿಯ ಹೆಸರಿನಡಿಯಲ್ಲಿ ಕುಂಚದಿಂದ ಗುರುತೊಂದನ್ನು ಮೂಡಿಸುತ್ತಾನೆ. ಈ ದೇವತೆ ಮನುಷ್ಯನಾಗಿದ್ದಾಗ ಪರೀಕ್ಷೆಗಳೆಲ್ಲದರಲ್ಲಿಯೂ ಪ್ರಪ್ರಥಮನಾಗಿ ಉತ್ತೀರ್ಣನಾದನಂತೆ. ಆದರೆ ಈತ ತುಂಬ ಕುರೂಪಿಯಾಗಿದ್ದುದರಿಂದ ಚಕ್ರವರ್ತಿ ಇವನಿಗೆ ಸನ್ಮಾನ ಮಾಡಲು ಹಿಂಜರಿದನಂತೆ. ಆಗ ನಿರಾಶನಾಗಿ ಈತ ಪ್ರಾಣ ಕಳೆದುಕೊಳ್ಳಲಿಚ್ಛಿಸಿ ಸಮುದ್ರಕ್ಕೆ ಹಾರಲು ಆಮೆಯೊಂದು ಈತನನ್ನು ಮೇಲಕ್ಕೆತ್ತಿಕೊಂಡು ಬಂದಿತಂತೆ. ಇದು ಕೂರ್ಮಾಸನದ ಕಥೆ.

		ಪರೀಕ್ಷೆಗೆ ಕಟ್ಟಿದ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಪ್ರಬಂಧವೊಂದನ್ನು ಬರೆಯಬೇಕಾಯಿತು. ಪ್ರಬಂಧ ಅವನಿಗೆ ಸಮರ್ಪಕವಾಗಿರಲಿಲ್ಲ; ತಾನು ಪರೀಕ್ಷೆಯಲ್ಲಿ ಉತ್ತೀರ್ಣನಾಗಲಾರನೆಂಬುದು ಖಚಿತವಾಯಿತು. ಮನೆಗೆ ಬಂದು ವೆನ್-ಚಾಂಗನ ಮರಹೊಕ್ಕು ನಿದ್ರೆಮಾಡಿದಾಗ ಅವನಿಗೊಂದು ಕನಸು. ಅದರಲ್ಲಿ ವೆನ್-ಚಾಂಗ್ ಕಾಣಿಸಿಕೊಂಡು ಹಲವಾರು ಪ್ರಬಂಧಗಳನ್ನು ಬೆಂಕಿಗೆ ಹಾಕುತ್ತಿದ್ದ; ಅದರಲ್ಲಿ ಆ ವಿದ್ಯಾರ್ಥಿಯದೂ ಇದ್ದಿತು. ಅನಂತರ ಒಂದು ಚಿಮ್ಮಟದಿಂದ ಈ ಪ್ರಬಂಧವನ್ನೇ ಮತ್ತೆ ಬೆಂಕಿಯಿಂದ ಮೇಲೆತ್ತಿದ. ಅದು ಸಂಪೂರ್ಣವಾಗಿ ಬೇರೆಯಾಗಿದ್ದಿತು. ವೆನ್-ಚಾಂಗ್  ಅದನ್ನು ವಿದ್ಯಾರ್ಥಿಗೆ ಕೊಟ್ಟು ಕಂಠಪಾಠ ಮಾಡುವಂತೆ ಹೇಳಿದ. ವಿದ್ಯಾರ್ಥಿ ಎಚ್ಚೆತ್ತು ಹೊರಗೆ ಬಂದಾಗ ಪರೀಕ್ಷಾಮಂದಿರವೆಲ್ಲ ಆಕಸ್ಮಿಕವಾಗಿ ಬೆಂಕಿಗೆ ತುತ್ತಾಗಿದ್ದಿತು. ಪರೀಕ್ಷೆ ಮತ್ತೆ ನಡೆಯಬೇಕಾಯಿತು. ಕನಸಿನಲ್ಲಿ ಕಂಠಪಾಠ ಮಾಡಿದ್ದ ಪ್ರಬಂಧವನ್ನು ವಿದ್ಯಾರ್ಥಿ ಬರೆದು ಪರೀಕ್ಷೆಯಲ್ಲಿ ಉತ್ತೀರ್ಣನಾದ.

		ಸುಖಕ್ಕೆ ಕಾರಣರಾದ ದೇವತೆಗಳಲ್ಲಿ ದೀರ್ಘಾಯುಷ್ಯವನ್ನು ಕೊಡುವ ಷೌ-ಹ್ಸಿಂಗ್ ಪ್ರಮುಖನಾದವ. ಬಕ್ಕ ತಲೆಯ ಮುದುಕ ಕೋಲೂರಿ ನಿಂತಿರುವಂತೆ ಚಿತ್ರಿಸುತ್ತಾರೆ. ಈ ದೇವತೆಯನ್ನು, ಪ್ರತಿಯೊಬ್ಬ ಚೀನೀಯನ ಹುಟ್ಟಿದ ಹಬ್ಬದಂದು ಈ ದೇವತೆಯ ಪೂಜೆ ನಡೆಯುತ್ತದೆ. ಪ್ರತಿಯೊಬ್ಬನ ಆಯುಷ್ಯವನ್ನೂ ಈ ದೇವತೆ ಮೊದಲೇ ನಿಶ್ಚಯಿಸಿ ಬರೆದಿಡುತ್ತಾನೆ. ಅದನ್ನು ತಪ್ಪಿಸುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ ಈ ದೇವತೆಯೇ ಅದನ್ನು ಬದಲಾಯಿಸಬಹುದು. ಒಮ್ಮೆ ಒಬ್ಬ ಹುಡುಗನ ಆಯುಷ್ಯವನ್ನು ಈ ದೇವತೆ 19 ಎಂದು ನಿರ್ಣಯಿಸಿದ್ದ. ಆದರೆ ಆ ಹುಡುಗ ದೇವತೆಗೆ ಪ್ರಿಯವಾದ ಸುರೆಯನ್ನು ಸಮರ್ಪಿಸಲು, ದೇವತೆ ಪ್ರಸನ್ನವಾಗಿ 19 ಎಂದಿದ್ದುದನ್ನು 91 ಎಂದು ತಿರುಗು ಮುರುಗು ಮಾಡಿಬಿಟ್ಟ! ಸಂತೋಷದ ದೇವತೆಯಾದ ಫು-ಹ್ಸಿಂಗ್ ಮತ್ತು ಸಂಬಳದ ದೇವತೆಯಾದ ಲು-ಹ್ಸಿಂಗ್ ಇಬ್ಬರೂ ಈ ಆಯುಷ್ಯದ ದೇವತೆಯ ಒಡನಾಡಿಗಳು, ಮೂವರನ್ನೂ ತ್ರಿಮೂರ್ತಿಗಳೆನ್ನುತ್ತಾರೆ. ಮೂವರೂ ಮೊದಲು ಮನುಷ್ಯರಾಗಿದ್ದು ಆನಂತರ ದೇವತೆಗಳಾದವರು.

	ದಿವ್ಯಕನ್ಯೆಯೆಂದು ಪ್ರಸಿದ್ಧಳಾದ ಚಿ-ನೈ ದೇವತೆಯ ಬಗ್ಗೆ ಕಥೆಗಳು ಬಹಳ ಇವೆ. ಪಿತೃಶ್ರೀಸ್ವರ್ಗ ದೇವತೆಯ ಮಗಳಾದ ಈಕೆ ತಂದೆಗೆ ಹೊಲಿಗೆಯಿಲ್ಲದ ಬಟ್ಟೆಗಳನ್ನು ಸಿದ್ಧಮಾಡಿಕೊಡುತ್ತಿದ್ದಳು. ಅವಳು ಒಂಟಿಯಾಗಿಯೇ ಇದ್ದುದರಿಂದ ಆಕೆಗೆ ಅನುರೂಪನಾದ ವರನನ್ನು ತಂದೆ ಕರುಣಿಸಿದ ಕಥೆ ಹೀಗಿದೆ. ಒಂದೂರಿನಲ್ಲಿ ಒಬ್ಬ ದನಕಾಯುವ ಗೊಲ್ಲನಿದ್ದ. ಅವನಿಗೆ ಸ್ವಲ್ಪ ಭೂಮಿಯಿದ್ದು ಅದನ್ನು ಉಳುತ್ತಿದ್ದ. ಉಳುಮೆಗೆ ಒಂದು ಎತ್ತೂ ಇದ್ದಿತು. ಮದುವೆಯ ವಯಸ್ಸಾದರೂ ಆತ ಒಂಟಿಯಾಗಿಯೆ ಇದ್ದ. ಒಂದು ದಿನ ಎತ್ತು 'ಒಡೆಯ, ಹಣದ ವೆಚ್ಚವಿಲ್ಲದೆ ಸುಂದರಿಯಾದ ಹುಡುಗಿಯೊಬ್ಬಳು ನಿನಗೆ ದೊರೆಯ ಬೇಕೆಂದರೆ ನಾನು ಹೇಳಿದಂತೆ ಮಾಡು. ಈ ರಾತ್ರಿ ಹಳ್ಳಿಯ ಕೊಳದ ಬಳಿ ಇರು; ಕೊಳದಲ್ಲಿ ಕೆಲವು ಹುಡುಗಿಯರು ಸ್ನಾನಮಾಡುತ್ತಿರುತ್ತಾರೆ. ಅವರ ಬಟ್ಟೆಗಳೆಲ್ಲ ದಡದ ಮೇಲಿರುತ್ತದೆ. ಅವುಗಳಲ್ಲಿ ಸೊಗಸಾದ ಒಂದು ಉಡುಪನ್ನು ಎತ್ತಿಕೊಂಡು ಬಂದು ಬಿಡು- ಎಂದು ಹೇಳಿತು. ಗೊಲ್ಲ ಅದರಂತೆಯೇ ಆ ರಾತ್ರಿ ಕೊಳಕ್ಕೆ ಹೋಗಿ ದಡದ ಮೇಲಿದ್ದ ಉಡುಪುಗಳಲ್ಲಿ ತುಂಬ ಚೆನ್ನಾಗಿದ್ದುದನ್ನು ಎತ್ತಿಕೊಂಡು ಬಂದು ತನ್ನ ಮನೆಯ ಹಿಂದಿನ ಬಾವಿಯಲ್ಲಿ ಹಾಕಿಬಿಟ್ಟ. ಆ ಉಡುಪು ದಿವ್ಯ ಕನ್ಯೆಯದು; ವರ್ಷದಲ್ಲಿ ಒಂದು ರಾತ್ರಿ ತನ್ನ ಸಖಿಯರೊಂದಿಗೆ ಈ ಕೊಳಕ್ಕೆ ಬಂದು ವಿಹರಿಸುತ್ತಿದ್ದಳು. ತನ್ನ ಉಡುಪಿಲ್ಲದೆ ಸ್ವರ್ಗಕ್ಕೆ ಹೋಗುವುದು ಆಗದು; ಹೀಗಾಗಿ ಆಕೆ ಗೊಲ್ಲನನ್ನೇ ಮದುವೆಯಾಗಿ ಅಲ್ಲೇ ಇದ್ದುಬಿಟ್ಟಳು; ಅವರಿಗೆ ಇಬ್ಬರು ಮಕ್ಕಳೂ ಆದರು. ಹಲವಾರು ವರ್ಷಗಳಾದ ಮೇಲೆ ಆಕೆ ಗಂಡನನ್ನು ಕುರಿತು "ನಾವು ಮದುವೆಯಾಗಿ ಇಷ್ಟುವರ್ಷಗಳಾದುವು; ಮಕ್ಕಳೂ ಆಗಿದ್ದಾರೆ. ಈಗಲಾದರೂ ಹೇಳು, ಅಂದು ನನ್ನ ಬಟ್ಟೆಯನ್ನು ಕದ್ದು ಎಲ್ಲಿ ಮುಚ್ಚಿಟ್ಟೆ?" ಎಂದು ಕೇಳಿದಳು. ಗೊಲ್ಲ ಬಾವಿಯಲ್ಲಿ ಎಂದು ಹೇಳಿಬಿಟ್ಟ. ಮರುದಿನವೇ ಆಕೆ ಬಾವಿಯಿಂದ ಉಡುಪನ್ನು ತೆಗೆದುಕೊಂಡು ಸ್ವರ್ಗಕ್ಕೆ ಹಿಂದಿರುಗಿಬಿಟ್ಟಳು. ಗೊಲ್ಲನಿಗೆ ವಿರಹವ್ಯಥೆ ತೀರದಾಯಿತು. ಮತ್ತೆ ತನ್ನ ಎತ್ತನ್ನು ಕೇಳಿದ. ಅದು ಹೇಳಿತು "ನಿನ್ನ ಇಬ್ಬರು ಮಕ್ಕಳನ್ನು ಎರಡು ಬುಟ್ಟಿಗಳಲ್ಲಿ ಕೂಡಿಸಿ ಒಂದು ಕಾವಡಿಗೆ ಕಟ್ಟಿ ನಿನ್ನ ಹೆಗಲಮೇಲೇರಿಸಿಕೊಂಡು, ನನ್ನ ಬಾಲವನ್ನು ಹಿಡಿದು ಹಿಂಬಾಲಿಸು ಎಂದು". ಅವನು ಹಾಗೆಯೇ ಮಾಡಲು ಎತ್ತು ಅವರನ್ನು ಸ್ವರ್ಗಕ್ಕೆ ಒಯ್ದು ಅಲ್ಲಿ ದಿವ್ಯಕನ್ಯೆಯ ತಂದೆಯಾದ ಪಿತೃಶ್ರೀಸ್ವರ್ಗ ದೇವತೆಯ ಬಳಿಗೆ ಕರೆತಂದಿತು. ಗೊಲ್ಲ ಅಲ್ಲಿ ತನ್ನ ಕಥೆಯನ್ನು ಹೇಳಿಕೊಂಡು ತನಗೆ ದಿವ್ಯಕನ್ಯೆಯನ್ನು ಹಿಂದಿರುಗಿಸಬೇಕೆಂದು ಬೇಡಿಕೊಳ್ಳಲು, ದೇವತೆ ತನ್ನ ಮಗಳನ್ನು ಕರೆಸಿ ಆಕೆಯಿಂದ ಗೊಲ್ಲನ ಕಥೆ ನಿಜವೆಂಬುದನ್ನರಿತು, ಗೊಲ್ಲನನ್ನು ಅಮರನನ್ನಾಗಿ ಮಾಡಿ ಸ್ವರ್ಗದಲ್ಲೇ ಇರಿಸಿಕೊಂಡ.

		ಪಿತೃ ಶ್ರೀ ಸ್ವರ್ಗದಿಂದ ಅಜ್ಞಪ್ತನಾಗಿ ಪೂರ್ವಶಿಖರಮಹಾಚಕ್ರವರ್ತಿ (ತಾಯ್ ಯುಹೇ-ಟ-ತಿ) ಎಂಬಾತ ಮನುಷ್ಯಲೋಕದ ಆಗುಹೋಗುಗಳನ್ನು ನೋಡಿಕೊಳ್ಳುತ್ತಾನೆ. ಮನುಷ್ಯನ ಹುಟ್ಟಿನಿಂದ ಸಾವಿನವರಗೆ ಅವನ ಕರ್ಮಾನುಸಾರ ನಿಯತಿಯಾಗಿ ನಡೆಯತಕ್ಕ ವಿದ್ಯಮಾನಗಳೆಲ್ಲವನ್ನೂ ಇವನೇ ನಿರ್ಧರಿಸುತ್ತಾನೆ. ಇವನ ಗುಡಿಗಳೇ ಚೀನದಲ್ಲಿ ಹಿಂದೆ ತುಂಬ ಜನಪ್ರಿಯವಾಗಿದ್ದವು. ಇವನದು ದೊಡ್ಡ ಪರಿವಾರ, ಪಾಪ ಪುಣ್ಯ ಲೆಕ್ಕ ಇಡುವ ಚಿತ್ರಗುಪ್ತರು ಈ ಪರಿವಾರದಲ್ಲಿ ಪ್ರಮುಖರು. ಇವನ ಮಗಳು ಮೇಘಶ್ರೀಮಾತೆ (ಪಿ-ಹ್ಸಿಯು-ಯುವಾನ್-ಚುನ್) ಹೆಂಗಸರನ್ನೂ ಮಕ್ಕಳನ್ನೂ ಕಾಪಿಡುವವಳು. ಇವಳ ಪೂಜೆಯೂ ಪ್ರಾಚೀನ ಚೀನದಲ್ಲಿ ವಿಶೇಷವಾಗಿ ನಡೆಯುತ್ತಿತ್ತು.

		ಇವರಲ್ಲದೆ ಚೀನದ ಪ್ರತಿಯೊಂದು ಪ್ರಾಂತ್ಯಕ್ಕೂ, ಪಟ್ಟಣಕ್ಕೂ ಪ್ರತ್ಯೇಕವಾದ ದೇವತೆಗಳಿದ್ದರು. ನಗರದ ನಿವಾಸಿಗಳನ್ನು ನೋಡಿಕೊಳ್ಳುವ ಇವರಿಗೆ ಗೋಡೆಯ ದೇವತೆ, ಕಂದಕದ ದೇವತೆ ಎಂದು ಮೊದಲಾಗಿ ಹೆಸರುಗಳಿದ್ದುವು. ಇವರೆಲ್ಲರೂ ಸಾಮಾನ್ಯವಾಗಿ ಮನುಷ್ಯರಾಗಿದ್ದವರೇ; ತಮ್ಮ ಶೀಲದಿಂದ, ಸಾಹಸದಿಂದ ದೇವತ್ವ ಪಡೆದವರು. ತೀರಿಕೊಂಡನಂತರ ಅವರಿಗೆ ಪುನರ್ಜನ್ಮ ಬಾರದಂತೆ ಕರುಣಿಸಿ ಪಿತೃಶ್ರೀಸ್ವರ್ಗ ಒಂದೊಂದು ಪ್ರದೇಶದ ಯೋಗಕ್ಷೇಮವನ್ನು ಒಬ್ಬೊಬ್ಬರಿಗೆ ವಹಿಸಿಕೊಡುತ್ತಾನೆ. ಚೀನೀ ಪುರಾಣಗಳಲ್ಲಿ ಹಲವಾರು ಇವರಿಗೆ ಸಂಬಂಧಿಸಿದುವು. ಇವರನ್ನು ನೇಮಕ ಮಾಡುವ ಮೊದಲು ಪ್ರದೇಶದ ನಿವಾಸಿಗಳಿಗೆ ಇದರ ವಿಚಾರವಾಗಿ ಕನಸಾಗುತ್ತದೆ. ಒಂದು ನಿರ್ದಿಷ್ಟವಾದ ದಿನದಂದು ಈತ ಅಧಿಕಾರವಹಿಸಿಕೊಳ್ಳುವನೆಂಬ ಸೂಚನೆ ಕನಸಿನಲ್ಲಿಯೇ ಒದಗಿದ್ದು, ಅಂದು ರಾತ್ರಿ ಬೀದಿಗಳಲ್ಲಿ ಗದ್ದಲ, ಮೇಳ, ಕೇಳಿಸಿಕೊಳ್ಳುತ್ತವೆ. ದೇವತೆ ಬಂದನೆಂದು ಇದರ ಅರ್ಥ. ಈ ದೇವತೆಯ ಪ್ರತಿಮೆಗಳನ್ನೂ ಮಾಡಿಟ್ಟು ಜನ ಪೂಜಿಸುತ್ತಾರೆ.

		ಗೃಹದೇವತೆಗಳೂ (ತ್ಸಓ-ವಂಗ್) ದ್ವಾರದೇವತೆಗಳೂ (ಮೆನ್-ಶೆನ್) ಇದ್ದಾರೆ. ಮನೆಯಲ್ಲಿರುವವರ ಕೆಲಸಗಳನ್ನೂ ಆಲೋಚನೆಗಳನ್ನೂ ಮಾತುಕತೆಗಳನ್ನೂ ಗೃಹದೇವತೆ ಪರೀಕ್ಷಿಸುತ್ತದೆ; ಅದರ ಸ್ಥಾನ ಒಲೆ, ವರ್ಷಕ್ಕೊಮ್ಮೆ (ಅವರ ಪಂಚಾಂಗದಲ್ಲಿ 12ನೆಯ ತಿಂಗಳ 23ನೇ ದಿನ ಈ ದೇವತೆ ಸ್ವರ್ಗಕ್ಕೆ ಹೋಗಿ ತನ್ನ ವರದಿಯನ್ನೊಪ್ಪಿಸುತ್ತದೆ. ಈ ದೇವತೆಗೆ ಪ್ರತಿಮೆಗಳಿಲ್ಲ ಕಾಗದದ ಮೇಲೆ ಇದರ ಚಿತ್ರವನ್ನು ಬರೆದು ಅಡುಗೆ ಮನೆಯಲ್ಲಿ ಇಟ್ಟಿರುತ್ತಾರೆ. ಅವನೊಂದಿಗೆ ಇರುವ ತ್ಸಓ-ವಂಗ್-ನೈ-ನೈ ಎಂಬ ಹೆಣ್ಣುದೇವತೆ ಮನೆಯಲ್ಲಿರುವ ಹೆಂಗಸರ ದಿನಚರಿಯನ್ನು ಗಮನಿಸುತ್ತದೆ. ತ್ಸಾಯ್-ಶೆನ್ ಭಾರತದ ಕುಬೇರನಿದ್ದಂತೆ, ಐಶ್ವರ್ಯಕ್ಕೆ ಅಭಿಮಾನಿದೇವತೆ. ಕುವಾನ್-ಟಿ ಸಮರ ದೇವತೆ, ಇಂದ್ರನಿದ್ದಂತೆ. ಆದರೆ ತಾಓಧರ್ಮದ ಎಣಿಕೆಯಂತೆ ಈ ದೇವತೆಯೇ ಲೋಕಪಾಲಕ, ಜನಗಣನಾಯಕ. ಇವನನ್ನು ಚಕ್ರವರ್ತಿಯೆಂದೂ ಕರೆಯುತ್ತಾರೆ. ಇವನು ಮೊದಲಿಗೆ ಹಾನ್ ದೇಶದ ಒಡೆಯನಾಗಿದ್ದವ, ಕ್ರಿಸ್ತಾಬ್ದ 770ರಲ್ಲಿ ಇವನನ್ನು ದೇವತೆಯೆಂದು ಪರಿಗಣಿಸಿಲಾರಂಭಿಸಿದರು. ಚೀನೀ ಪುರಾಣಗಳಲ್ಲಿ ವೃತ್ತಿದೇವತೆಗಳೂ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ. ನರಕದ ಕಲ್ಪನೆಯೂ ಇವರಲ್ಲಿ ಇದ್ದು ಯಮನ (ಯೆನ್-ವಂಗ್) ಕಲ್ಪನೆಯೂ ಇದೆ. ಹದಿನೆಂಟು ನರಕಗಳನ್ನು ಇವರು ಹೇಳುತ್ತಾರೆ.

		ಬೌದ್ಧಧರ್ಮದ ಪ್ರಭಾವವನ್ನು ತಳೆದು ಕ್ಷಿತಿಗರ್ಭ (ತಿ-ತ್ಸಂಗ್ ವಂಗ್-ಪುಸ) ಬೋಧಿಸತ್ವನೆಂಬ ಪರಮಕಾರುಣಿಕ ದೇವತೆ ಪಾಪಿಗಳನ್ನು ಉದ್ದಾರಮಾಡುವುದಕ್ಕೆಂದು ನರಕಗಳಲ್ಲಿ ಅಲೆದಾಡುತ್ತಿರುತ್ತಾನೆ. ಚೀನೀ ಜನರಲ್ಲಿ ಯಾರಾದರೂ ಸತ್ತಾಗ ಈ ದೇವತೆಯನ್ನು ಸ್ಮರಿಸಿಕೊಳ್ಳುವ ಪದ್ಧತಿಯಿದ್ದಿತು. ಬೌದ್ಧ ಬಿಕ್ಷುವಿನಂತೆಯೇ ಈ ದೇವತೆಯನ್ನು ಚಿತ್ರಿಸಿಕೊಂಡಿದ್ದಾರೆ. ಇವನ ಕೈಯಲ್ಲಿರುವ ಮಣಿಯಿಂದ ಪಾಪಿಗಳಿಗೆ ಒಳ್ಳೆಯ ದಾರಿ ಬೆಳಗುತ್ತದೆ. ಅದು ಇಲ್ಲದಿದ್ದರೆ ನರಕದಲ್ಲಿ ಕಾಳಕತ್ತಲೆಯೇ.

		ಚೀನೀ ಪುರಾಣಗಳಲ್ಲಿ ನರಕದ ಪ್ರಸ್ತಾಪ ಮುಖ್ಯವಾಗಿಯೇ ಬರುತ್ತದೆ. ಮನುಷ್ಯನ ಆಯಸ್ಸು ತೀರಿದೊಡನೆ ಯಮ ಇಬ್ಬರು ದೂತರನ್ನು ಕಳುಹಿಸಿ ಜೀವಿಯ ಜೀವವನ್ನು ಸೆರೆಹಿಡಿದು ತಂದು ನರಕದ ನ್ಯಾಯಾಲಯದ ಮುಂದೆ ನಿಲ್ಲಿಸುವ ಪ್ರಯತ್ನ ಮಾಡುತ್ತಾನೆ. ಇಬ್ಬರು ದೂತರಲ್ಲಿ ಒಬ್ಬ ವೃಷಭಮುಖಿ ಇನ್ನೊಬ್ಬನು ಅಶ್ವಮುಖಿ. ಇವರಿಬ್ಬರು ಯಮನ ಅಣತಿಯನ್ನು ಪಡೆದು ಮನುಷ್ಯನ ಮನೆಗೆ ಬಂದಾಗ, ಮನೆಯ ದ್ವಾರ ದೇವತೆಗಳು ಯಮನ ಅಣತಿಯನ್ನು ಪರೀಕ್ಷಿಸಿ ದೂತರನ್ನು ಒಳಗೆ ಬಿಡುತ್ತಾರೆ. ಆಮೇಲೆ ದೂತರು ಜೀವವನ್ನು ದೇಹದಿಂದ ಬೇರ್ಪಡಿಸಿ ಒಯ್ದು ಗೋಡೆ ದೇವತೆಗಳು ಮತ್ತು ಕಂದುಕದ ದೇವತೆಗಳ ಮುಂದೆ ನಿಲ್ಲಿಸುತ್ತಾರೆ. ಈ ದೇವತೆಗಳು ಜೀವವನ್ನು 49 ದಿನಗಳ ಕಾಲ ಪರೀಕ್ಷೆಗೆ ಒಳಪಡಿಸಿ ಅನಂತರ ಅದರ ಕರ್ಮಾನುಸಾರವಾಗಿ ಶಿಕ್ಷೆಗೆ ಒಳಪಡಿಸುತ್ತಾರೆ, ಇಲ್ಲವೇ ಬಿಟ್ಟು ಬಿಡುತ್ತಾರೆ. ಕೆಲವೊಮ್ಮೆ ಹೆಸರಿನ ಸಾದೃಶ್ಯದಿಂದ ದೂತರು ಬೇರೊಂದು ಜೀವವನ್ನು ತಂದು ಬಿಟ್ಟಿರುವುದುಂಟು. ಇಂತಹ ಸಂದರ್ಭಗಳಲ್ಲಿ ಈ ದೇವತೆಗಳು ಜೀವ ಮತ್ತೆ ಭೂಮಿಗೆ ಬಂದು ತನ್ನ ಹಳೆಯ ದೇಹದೊಳಗೆ ಪ್ರವೇಶ ಮಾಡಲು ಅವಕಾಶಮಾಡಿಕೊಡುತ್ತಾರೆ. ಈ ಕಾರಣಕ್ಕಾಗಿಯೇ ಚೀನೀ ಜನ ಮೃತದೇಹವನ್ನು ಹಲವಾರು ದಿನಗಳು (ಕನಿಷ್ಠ ಪಕ್ಷ 7 ಹೆಚ್ಚೆಂದರೆ 49) ಇರಿಸಿಕೊಂಡಿದ್ದು ಆನಂತರ ಹೂಳುತ್ತಾರೆ. ಹೀಗೆ ದೇವತೆಗಳು 49 ದಿನಗಳು ಪರೀಕ್ಷೆ ಮಾಡಿದ ಮೇಲೆ ಜೀವವನ್ನೇ ಯಮನಿಗೆ ಒಪ್ಪಿಸುತ್ತಾರೆ. ಯಮ ಶ್ರೇಷ್ಠ ನ್ಯಾಯಾಧೀಶನಂತೆ ಕೆಲಸ ಮಾಡಿ ಜೀವಕ್ಕೆ ಸಲ್ಲಬೇಕಾದ ಗತಿಯನ್ನು ನಿರ್ಧರಿಸುತ್ತಾನೆ. ಪುಣ್ಯ ಮಾಡಿದ ಜೀವಗಳು ಪಶ್ಚಿಮದಲ್ಲಿರುವ ಬುದ್ಧಕ್ಷೇತ್ರಕ್ಕೆ ಅಥವಾ ಕ್ಯುನ್ ಲುನ್ ಪರ್ವತದ ಮೇಲಿರುವ ಅಮರರ ವಿಹಾರಭೂಮಿಗೆ ತೆರಳಿ ಅಲ್ಲಿ ಸುಖಪಡುತ್ತವೆ. ಪಾಪಿಗಳು ನರಕದಲ್ಲಿ ಅಸಹ್ಯ ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಮನುಷ್ಯ ಜೀವಗಳು ಪಾಪ ಮಾಡಿ ಪಶುಪಕ್ಷಿಗಳ ದೇಹಕ್ಕೆ ಸಂಸರ್ಗವಾಗುವುದೂ ಉಂಟು. ಬೌದ್ಧಧರ್ಮದ ಪ್ರಭಾವದಿಂದಾಗಿ ಚೀನೀ ಪುರಾಣಗಳಲ್ಲಿ ಪುನರ್ಜನ್ಮದ ಕಲ್ಪನೆ ದೃಢವಾಗಿ ಬೇರೂರಿರುವುದು ಕಾಣುತ್ತದೆ.

		ನರಕ ದೊಡ್ಡದೊಂದು ರಾಜ್ಯ, ಅದರಲ್ಲಿ ಪಟ್ಟಣಗಳಿವೆ. ಹಳ್ಳಿಗಳಿವೆ, ಉದ್ಯಾನಗಳಿವೆ. ಮೃತನ ಜೀವ ರಾಕ್ಷಸದ್ವಾರದಿಂದ (ಕುವಿ-ಮೆನ್-ಕುವಾನ್) ನರಕದ ಮುಖ್ಯಪಟ್ಟಣವಾದ ಫೆಂಗ್-ತುವನ್ನು ಪ್ರವೇಶಿಸುತ್ತದೆ. ಇದರಲ್ಲಿ ಯಮನ ಅರಮನೆ, ನ್ಯಾಯಾಲಯ, ಯಾತನಾಕ್ಷೇತ್ರಗಳಿರುತ್ತವೆ. ಯಮನ ಪರಿವಾರದವರೂ ಅಧಿಕಾರಿಗಳೂ ಇಲ್ಲಿಯೇ ತಂತಮ್ಮ ಮನೆಗಳಲ್ಲಿ ವಾಸಮಾಡುತ್ತಾರೆ. ರಾಕ್ಷಸದ್ವಾರಕ್ಕೆ ಎದುರುಭಾಗದಲ್ಲಿ ಹೌನೈಹೋ ಎಂಬ ನದಿಯಿದ್ದು ಅದನ್ನು ದಾಟಲು ಮೂರು ಸೇತುವೆಗಳಿರುತ್ತವೆ; ದೇವತೆಗಳಿಗಾಗಿ ಸ್ವರ್ಣಸೇತುವೆ, ಪುಣ್ಯ ಮಾಡಿದ ಜೀವಗಳಿಗಾಗಿ ಬೆಳ್ಳಿಸೇತುವೆ, ಪಾಪಿಗಳಿಗಾಗಿ ತುಂಬ ಉದ್ದದ ಕಟಕಟೆಯಲ್ಲದ ಸೇತುವೆ. ಪಾಪಿಗಳು ತಮ್ಮ ಸೇತುವೆಯ ಮೇಲೆ ನಡೆಯುವಾಗ ನದಿಯೊಳಗೆ ಬೀಳದೆ ವಿಧಿಯಿಲ್ಲ. ಹಾಗೆ ಬಿದ್ದಾಗ ನದಿಯಲ್ಲಿ ಹಾವುಗಳೂ ನಾಯಿಗಳೂ ಅವರನ್ನು ಕಚ್ಚಿ, ಹರಿದು, ಚೂರುಚೂರು ಮಾಡುತ್ತವೆ. ಈ ಪಟ್ಟಣದ ಹತ್ತಿರದಲ್ಲಿ ಇನ್ನೊಂದು ಪಟ್ಟಣವಿದ್ದು ಅದರಲ್ಲಿ ಆಕಸ್ಮಿಕದಿಂದ, ಅಪಘಾತದಿಂದ, ಆತ್ಮಹತ್ಯೆಯಿಂದ ಸತ್ತವರ ಜೀವಗಳಿರುತ್ತವೆ. ಆಯಸ್ಸು ತೀರುವ ಮೊದಲೇ ಸತ್ತ ಇವರು ಈ ಪಟ್ಟಣದಲ್ಲಿ ಹಸಿದ ಪಿಶಾಚಿಗಳಂತೆ ಆಯಸ್ಸು ತೀರುವವರೆಗೂ ಇರಬೇಕಾಗುತ್ತದೆ. ಅಲ್ಲಿಯವರೆಗೆ ಅವರಿಗೆ ಪುನರ್ಜನ್ಮವಿರದು.

	ಸ್ವರ್ಗ ಪುಣ್ಯಜೀವಿಗಳ ವಿಹಾರಕ್ಷೇತ್ರ. ಪಶ್ಚಿಮದಿಗ್ಭಾಗದಲ್ಲಿರುವ, ಅಮಿತಾಭಬುದ್ಧ ಆಳುವ ಸುಖಾವತಿ ಇಂಥದೊಂದು ಸ್ವರ್ಗ, ಕ್ಯುನ ಲುನ್ ಪರ್ವತ ಇನ್ನೊಂದು ಸ್ವರ್ಗ. ಇದು ಗ್ರೀಕರ ಒಲಿಂಪಸ್ ಇದ್ದಹಾಗೆ. ಆದರೆ ಕ್ಯುನ್ ಲುನ್ ಭೂಮಿಯ ಮಧ್ಯಭಾಗದಲ್ಲಿ, ಚೀನಕ್ಕೆ ತುಂಬ ದೂರ ಇರುವ ಕಾಲ್ಪನಿಕ ಪರ್ವತ. ಪಿತೃಶ್ರೀಸ್ವರ್ಗ ದೇವತೆಯ ಹೆಂಡತಿ ವಂಗ್-ಮಾತೆಯೇ ಈ ಪರ್ವತವನ್ನು ಆಳುವವಳು ಪರ್ವತದ ತುತ್ತತುದಿಯಲ್ಲಿ ಒಂಬತ್ತು ಅಂತಸ್ತುಗಳ ಅರಮನೆ ಸಂಪೂರ್ಣವಾಗಿ ಜೇಡ್‍ನಲ್ಲಿಯೆ ನಿರ್ಮಿತವಾಗಿದ್ದು ಅಲ್ಲಿ ವಂಗ್-ಮಾತೆ ವಾಸಿಸುತ್ತಾಳೆ. ಅರಮನೆಯ ಸುತ್ತಲೂ ರಮಣೀಯವಾದ ಉದ್ಯಾನವಿದ್ದು ಬಗೆಬಗೆಯ ಸುಖಸಂತೋಷಗಳಿರುತ್ತವೆ. ಅಮರತ್ವವನ್ನು ಕೊಡುವ ಪೀಚ್ ಹಣ್ಣಿನ ಮರ ಇರುವುದು ಅಲ್ಲಿಯೆ. ಪುಣ್ಯಜೀವಿಗಳು ಆ ಉದ್ಯಾನದಲ್ಲಿ ವಿಹರಿಸಿ ಪೀಚ್‍ಹಣ್ಣನ್ನು ಸವಿಯಬಹುದು.

		ಹೀಗೆ ಚೀನೀ ಪುರಾಣಗಳಲ್ಲಿ ಹಲವಾರು ನೆಲೆಯ ಪ್ರಾಚೀನ ಕಲ್ಪನೆಗಳು ಸೇರಿಕೊಂಡಿವೆ. ಭೂಮಿಯ ಮೇಲಿನ ಬದುಕು ನೀತಿಯುತವಾಗಿರಬೇಕು ಎನ್ನುವುದೇ ಈ ಪುರಾಣಕಥೆಗಳ ಸಂದೇಶ. 				    (ಎಸ್.ಕೆ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ